" ತೇವಾರಂ " -
ತಮಿಳು ನಾಡಿನ ಶೈವ ಸಮಯಾಚಾರ್ಯರುಗಳಲ್ಲಿ ಮೊದಲ ಮೂವರಾದ ತಿರುಜ್ಞಾನ ಸಂಬಂದರ್, ತಿರುನಾವುಕ್ಕರಸರ್ (ನೋಡಿ- ಅಪ್ಪರ್), ಸುಂದರಮೂರ್ತಿ (ಸುಂದರರ್) ಇವರಿಂದ ರಚಿತವಾದ ಸ್ತೋತ್ರ ಸಂಕಲನ. ಈ ಮೂವರನ್ನು ನಾಯನಾರ್ ಅಥವಾ ಅಡಿಯಾರ್ ಎಂದೂ ಕರೆಯುತ್ತಾರೆ. ತೇ ಎಂದರೆ ದೇವರ, ಆರಂ ಎಂದರೆ ಹಾರ, ದೇವರ ಸ್ತೋತ್ರ ಮಾಲಿಕೆಯೇ ತೇವಾರ. ತೇವಾರದೊಡನೆ ಮಾಣಿಕ್ಯ ವಾಚಕರ ತಿರುವಾಚಕವನ್ನು ಸೇರಿಸಿ ತೇವಾರ ತಿರುವಾಚಕ ಎಂದು ಒಟ್ಟಾಗಿ ಹೇಳುವುದು ಪದ್ಧತಿ. ಇದನ್ನು ಶೈವರು ತಮಿಳು ಶೈವ ವೇದವೆಂದು ಹೇಳಿ ಗೌರವಿಸುವುದುಂಟು. ಭಾರತೀಯ ಸಂತ ಸಾಹಿತ್ಯದಲ್ಲಿ ಇದಕ್ಕೆ ಹಿರಿಯ ಸ್ಥಾನವಿದೆ. ಕರ್ನಾಟಕದ ಶಿವಶರಣರ ಮೇಲೂ ಇದರ ಪ್ರಭಾವ ಬಿದ್ದಿದೆ. ತೇವಾರ ಪದ್ಯಗಳ ಒಟ್ಟು ಸಂಖ್ಯೆ ಒಂದು ಲಕ್ಷ ಎರಡು ಸಾವಿರ ದಶಕಗಳೆಂದು ಪ್ರತೀತಿ. ಈಗ ಇರುವುದು 797 ದಶಕಗಳು ಮಾತ್ರ. ನಂಬಿಯಾಂಡಾರ್ ನಂಬಿ ಎಂಬಾತ ಇವನ್ನು ಏಳು ವಿಭಾಗವಾಗಿ ವಿಂಗಡಿಸಿದ್ದಾನೆ. ಈ ವಿಭಾಗಗಳಿಗೆ ಅಂಡಗಲ್ ಮುಳ್ಂಜೈ ಎಂಬ ಹೆಸರಿದೆ.  					(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ